ನಾಯಕತ್ವ ನೀಡುವುದಾದರೆ ಮಾತ್ರ ರಾಜಸ್ಥಾನ್​ ತಂಡಕ್ಕೆ ಸೇರಿಕೊಳ್ತೀನಿ ಅಂದ್ರಾ ಜಡೇಜಾ..? ಏನಿದು ಹೊಸ ಕಥೆ..? | IPL 2026

Mahendra Singh Dhoni, Ravindra Jadeja
Published on

Chennai: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ನಡುವಿನ ವ್ಯಾಪಾರ ಮಾತುಕತೆ ಮುಂದುವರೆದಿದ್ದು, ಈ ಬಾರಿಯ ಐಪಿಎಲ್​​ನಲ್ಲಿ (IPL 2026) ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆ ಇದೆ. ನಡೆಯುತ್ತಿರುವ ಚರ್ಚೆಯ ಪ್ರಕಾರ ಸಿಎಸ್‌ಕೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಇಂಗ್ಲೆಂಡ್‌ನ ಸ್ಯಾಮ್ ಕರನ್ ಆರ್​ಆರ್​ಗೆ, ಇತ್ತ ಆರ್‌ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್ ಚೆನ್ನೈಗೆ ವಿನಿಮಯವಾಗುವ ಲಕ್ಷಣಗಳು ಕಂಡು ಬರುತ್ತಿವೆ.

ಈ ವಿಷಯವಾಗಿ ಮಾತುಕತೆಗಳು ನಡೆಯುತ್ತಿರುವುದಾದರು ಅವು ಅಂದುಕೊಂಡಷ್ಟು ಸುಲಭವಿಲ್ಲ. ಇದರಲ್ಲಿ ಹಣಕಾಸು ವ್ಯವಹಾರವೂ ಇರುವುದರಿಂದ ಸಂಕಿರ್ಣತೆ ಹಾಗೆಯೇ ಇದೆ.

ರಾಜಸ್ಥಾನ್​ ರಾಯಲ್ಸ್​ ತಂಡವು ಸ್ಯಾಮ್​ ಕರನ್​ರನ್ನು ಆಯ್ಕೆ ಮಾಡುವ ಅನಿವಾರ್ಯತೆ ಸೃಷ್ಟಿಯಾದರೆ, ವಿದೇಶಿ ಆಟಗಾರನನ್ನು ಬಿಡುಗಡೆ ಮಾಡಬೇಕಾಗಬಹುದು. ವಿನಿಮಯ ಇನ್ನೂ ಲೆಕ್ಕಾಚಾರದ ಹಂತದಲ್ಲಿದ್ದು, ಆಲ್​​ರೌಂಡರ್​ ಜಡೇಜಾ ತಮ್ಮನ್ನು ಆರ್​ಆರ್​ನ ನಾಯಕನನ್ನಾಗಿ ನೇಮಿಸುವುದಾದರೆ ಮಾತ್ರ ಈ ಮಾತುಕತೆಗೆ ಒಪ್ಪುತ್ತೇನೆ ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನುವ ಗುಸು ಗುಸು ಕೇಳಿಬಂದಿರುವುದರಿಂದ, ಇದು ಮತ್ತೊಂದು ಸುತ್ತಿನ ಚರ್ಚೆಗೆ ತಿರುಗುವ ಸಾಧ್ಯತೆ ಇದೆ.

37 ವರ್ಷದ ಜಡೇಜಾ ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲು ಇಚ್ಛಿಸಿದ್ದಾರೆ. ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್​​ರನ್ನು ಭವಿಷ್ಯದ ನಾಯಕರನ್ನಾಗಿ ಘೋಷಿಸಲು ರಾಯಲ್ಸ್ ಆಡಳಿತ ಮಂಡಳಿ ಆಲೋಚಿಸಿತ್ತು, ಈಗ ಜಡೇಜಾ ನೀಡಿದ್ದಾರೆ ಎನ್ನಲಾದ ಆಫರ್​, ಆರ್​ಆರ್​ಗೆ ಹೊಸ ತಲೆನೋವು ತಂದಿದೆ. ಜಡೇಜಾಗೆ ಅನುಭವ ಮತ್ತು ನಾಯಕತ್ವದ ಗುಣಗಳು ಇರುವುದರಿಂದ, ಆರ್​ಆರ್​ ಆಡಳಿತ ಮಂಡಳಿ ಕೂಡ ಅವರ ಬೇಡಿಕೆಯನ್ನು ಒಪ್ಪಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅದೇನೆ ಇದ್ದರೂ ವ್ಯಾಪಾರದ ಮಾತುಕತೆಗಳು ಅಂತಿಮಗೊಂಡ ಬಳಿಕವೇ ಅಧಿಕೃತ ನಿರ್ಧಾರ ಹೊರಬೀಳಲಿದೆ.

ಸಂಜು ಸ್ಯಾಮ್ಸನ್ ಕಥೆ ಏನು...?

ಇತ್ತ ಆರ್​ಆರ್​ನಿಂದ ಚೆನ್ನೈಗೆ ವಿನಿಮಯವಾಗಲಿದ್ದಾರೆ ಎನ್ನಲಾದ ಕೇರಳ ಮೂಲದ ಸಂಜು ಸ್ಯಾಮ್ಸನ್​ಗೆ ಸಿಎಸ್​ಕೆ ನಾಯಕತ್ವ ನೀಡುವ ಬಗ್ಗೆ ಯಾವ ಆಲೋಚನೆಗಳು ತಂಡದ ಆಡಳಿತ ಮಂಡಳಿಗೆ ಇದ್ದಂತಿಲ್ಲ. ಆದ್ದರಿಂದ ಈ ಹಿಂದೆ ತಂಡವನ್ನು ಮುನ್ನಡೆಸಿದ್ದ ರುತುರಾಜ್ ಗಾಯಕ್ವಾಡ್ ಅವರೇ, 2026 ರ ಆವೃತಿಗೂ ನಾಯಕನಾಗಿ ಮುಂದುವರಿಯುವ ನಿರೀಕ್ಷೆಯಿದೆ. ಸ್ಯಾಮ್ಸನ್ ಸೇರ್ಪಡೆ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net